Yashas

ವಿವೇಕಾನಂದ ವಿದ್ಯಾವರ್ಧಕ ಸಂಘದ ಯಶಸ್ ಕೇಂದ್ರ ಉದ್ಘಾಟನೆ

ದೃಢತೆ ಇದ್ದರೆ ಸ್ಪರ್ಧಾತ್ಮಕ ಪರೀಕ್ಷೆ ಗೆಲ್ಲಬಹುದು: ಎಎಸ್ಪಿ ರಾಹುಲ್ ಕುಮಾರ್

ಪುತ್ತೂರು: ಐಎಎಸ್, ಐಪಿಎಸ್ ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದುವುದು ನಿರೀಕ್ಷಿಸಿದಷ್ಟು ಕಷ್ಟವೇನಲ್ಲ. ವಿಮರ್ಶಾ ದೃಷ್ಟಿಕೋನ ಹಾಗೂ ಬಲಿಷ್ಟ ಮನಸ್ಥಿತಿ ಪ್ರತಿಯೊಬ್ಬರನ್ನೂ ಈ ಕ್ಷೇತ್ರದಲ್ಲಿ ಗೆಲ್ಲುವಂತೆ ಮಾಡಬಲ್ಲುದು ಎಂದು ಬಂಟ್ವಾಳದ ಎ.ಎಸ್.ಪಿ. ರಾಹುಲ್ ಕುಮಾರ್, ಐಪಿಎಸ್ ಹೇಳಿದರು.

ಅವರು ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಂಗಸಂಸ್ಥೆಯಾದ ವಿವೇಕಾನಂದ ಅಧ್ಯಯನ ಕೇಂದ್ರವು ನಡೆಸುವ ಯಶಸ್ ತರಬೇತಿ ಕೇಂದ್ರವನ್ನು ಉದ್ಘಾಟಿಸಿ ಗುರುವಾರ ಮಾತನಾಡಿದರು.

Yashas

ಯು.ಪಿ.ಎಸ್.ಸಿ ಪರೀಕ್ಷೆಗಳಲ್ಲಿ ಎಷ್ಟು ಹೊತ್ತು ಓದಿದೆ ಎನ್ನುವುದು ನಿರೀಕ್ಷಿತ ಫಲತಾಂಶ ನೀಡುವುದಿಲ್ಲ. ಬದಲಾಗಿ ಹೇಗೆ ಓದಿದೆ ಹಾಗೂ ಎಷ್ಟು ವಿಸ್ತೃತವಾಗಿ ಅರ್ಥಮಾಡಿಕೊಂಡೆ ಅನ್ನುವುದು ಮುಖ್ಯವಾಗುತ್ತದೆ. ಅದರಲ್ಲೂ ಗುಂಪಾಗಿ ಪರೀಕ್ಷೆಗೆ ಸಿದ್ಧರಾಗುವುದು ಹೆಚ್ಚಿನ ದೃಢತೆ ಹಾಗೂ ಪ್ರೇರಣೆಯನ್ನು ನೀಡಬಲ್ಲುದು ಎಂದರಲ್ಲದೆ ಇಂಗ್ಲಿಷ್ ಭಾಷೆ ಅತ್ಯಂತ ಅಗತ್ಯ ಎಂದು ನುಡಿದರು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಮಾಜಿ ಗೌರವಾಧ್ಯಕ್ಷ ಕೆ ರಾಮ ಭಟ್ ಮಾತನಾಡಿ ಪ್ರಾಮಾಣಿಕತೆಯನ್ನು, ದಕ್ಷತೆಯನ್ನು ಮಕ್ಕಳು ಸಣ್ಣವರಿದ್ದಾಗಲೇ ತುಂಬಬೇಕು. ಆಗ ಮಾತ್ರ ಸಮಾಜ ಪರಿವರ್ತನೆಗೊಳ್ಳಲು ಸಾಧ್ಯ. ರಾಷ್ಟ್ರ, ರಾಜ್ಯವನ್ನು ನಿಜವಾಗಿ ಆಳುವವರು ಐಎಎಸ್, ಐಪಿಎಸ್‌ನಂತಹ ಅಧಿಕಾರಿ ವರ್ಗವೇ ಹೊರತು ರಾಜಕಾರಣಿಗಳಲ್ಲ. ಈ ಹಿನ್ನಲೆಯಲ್ಲಿ ಹೆಚ್ಚು ಹೆಚ್ಚು ಮಂದಿ ಈ ಸ್ಪರ್ಧಾತ್ಮಕ ಪರೀಕ್ಷೆಯೆ ಸಿದ್ಧರಾಗಭೇಕು ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಅಖಿಲ ಭಾರತೀಯ ಸಹಬೌದ್ಧಿಕ್ ಪ್ರಮುಖ್ ಮುಕುಂದ ಮಾತನಾಡಿ ಯಶಸ್ಸು ಅನ್ನುವುದು ಸಮಾಜ ನಮ್ಮನ್ನು ಗುರುತಿಸುವುದರಲ್ಲಿ ಅಡಗಿಲ್ಲ. ಬದಲಾಗಿ ನಾವು ಯಾವುದನ್ನು ಯಶಸ್ಸು ಅಂದುಕೊಂಡಿದ್ದೇವೆಯೋ ಮತ್ತು ಯಾವುದನ್ನು ಸಾಧಿಸಿದರೆ ನಮ್ಮ ಮನಸ್ಸಿಗೆ ಯಶಸ್ಸು ಅನ್ನಿಸುತ್ತದೆಯೋ ಅದೇ ಆಗಿದೆ. ಇದರೊಂದಿಗೆ ಸಮಾಜದ ಯಶಸ್ಸು ನಮ್ಮ ಯಶಸ್ಸನ್ನು ಕಾಣುವುದಕ್ಕೆ ಸಾಧ್ಯವಾದರೆ ನಾವು ಅತ್ಯುನ್ನತಿಯನ್ನು ಕಾಣಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಸ್.ಆರ್.ರಂಗಮೂರ್ತಿ ಮಾತನಾಡಿ ಕೆಲವೊಂದು ಭ್ರಷ್ಟ ಪ್ರಕರಣಗಳನ್ನು, ದುಷ್ಟ ಪ್ರವೃತ್ತಿಗಳನ್ನು ಕಂಡ ತಕ್ಷಣ ಇಡೀ ಸಮಾಜವೇ ಕೆಟ್ಟು ಹೋಗಿದೆ, ದೇಶವೇ ಹಾಳಾಗಿ ಹೋಗಿದೆ ಎಂಬ ತೀರ್ಮಾನಕ್ಕೆ ಬರುತ್ತೇವೆ. ಆದರೆ ಅನೇಕಾನೇಕ ಅತ್ಯುತ್ತಮ ವ್ಯವಸ್ಥೆಗಳೂ ನಮ್ಮಲ್ಲಿವೆ ಎಂಬುದನ್ನು ಗಮನಿಸಬೇಕು. ಈ ಹಿನ್ನಲೆಯಲ್ಲಿ ಅಂತಹದೇ ಉತ್ತಮ ವ್ಯವಸ್ಥೆಯಾಗಿ ಯಶಸ್ ಕೂಡ ಮೂಡಿಬಂದಿದೆ ಎಂದರು.

ಈ ಸಂದರ್ಭದಲ್ಲಿ ಯಶಸ್ ಕೇಂದ್ರಕ್ಕೆ ಆಯ್ಕೆಯಾದ 24 ವಿದ್ಯಾರ್ಥಿಗಳನ್ನು ಪರಿಚಯಿಸಿ, ಅಭಿನಂದಿಸಲಾಯಿತು. ಅಲ್ಲದೆ ವಿದ್ಯಾರ್ಥಿಗಳಿಂದ ಸಮೂಹ ಗೀತೆ ನಡೆಯಿತು. ಜತೆಗೆ ಯಶಸ್ ಕೇಂದ್ರದ ಪದಾಧಿಕಾರಿಗಳನ್ನು ಮತ್ತು ಸದಸ್ಯರನ್ನು ಘೋಷಿಸಲಾಯಿತು.

ವೇದಿಕೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶಿವಪ್ರಸಾದ್ ಇ., ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಜೀವನ್‌ದಾಸ್ ಎ. ಉಪಸ್ಥಿತರಿದ್ದರು.

ಯಶಸ್ ಕೇಂದ್ರದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಯಶಸ್ ಕೇಂದ್ರದ ಕಾರ್ಯದರ್ಶಿ ಮಹಾದೇವ ಶಾಸ್ತ್ರಿ ಸ್ವಾಗತಿಸಿದರು. ಕೇಂದ್ರದ ಅಧ್ಯಕ್ಷ ಬಂಗಾರಡ್ಕ ವಿಶ್ವೇಶ್ವರ ಭಟ್ ಪ್ರಸ್ತಾವನೆಗೈದರು. ಯಶಸ್ ಕೇಂದ್ರದ ಡಾ. ಸೂರ್ಯನಾರಾಯಣ ವಂದಿಸಿದರು. ಉನ್ಯಾಸಕ ರಘುರಾಜ್ ಉಬರಡ್ಕ ಕಾರ್ಯಕ್ರಮ ನಿರ್ವಹಿಸಿದರು.