Yashas

ನೆರೆ ಸಮಸ್ಯೆಗಳ ಬಗ್ಗೆ ‘ಯಶಸ್’ ವಿದ್ಯಾರ್ಥಿಗಳ ಪ್ರಾಯೋಗಿಕ ಅಧ್ಯಯನ – ದೇವಾಲಯವನ್ನು ಸ್ವಚ್ಛಗೊಳಿಸಿದ ವಿದ್ಯಾರ್ಥಿಗಳು

ಉಪ್ಪಿನಂಗಡಿ: ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಾಲಯಕ್ಕೆ ವಿವೇಕಾನಂದ ಅಧ್ಯಯನ ಕೇಂದ್ರ – “ಯಶಸ್”ನ ವಿದ್ಯಾರ್ಥಿಗಳು ಸಂಗಮ ವೀಕ್ಷಣೆ ಮತ್ತು ನೆರೆಪೀಡಿತ ಪ್ರದೇಶಗಳ ಅಧ್ಯಯನದಲ್ಲಿ ದಿನಾಂಕ 10.08.2019ರಂದು ಭಾಗವಹಿಸಿದರು.

ನೆರೆ ವೀಕ್ಷಣೆ ಹಾಗೂ ಸಂಗಮ ವೀಕ್ಷಣೆಗಾಗಿ ಬಂದ ವಿದ್ಯಾರ್ಥಿಗಳು ದೇವಳದ ಒಳ ಪ್ರಾಂಗಣದಲ್ಲಿ ನೆರೆ ನೀರಿನಿಂದ ತುಂಬಿ ಹೋಗಿದ್ದ ಕೆಸರನ್ನು ಕಂಡು ಅದನ್ನು ತೆರವುಗೊಳಿಸಲು ಸಂಕಲ್ಪಿಸಿದರು. ತಮ್ಮ ಮನೋಭಿಲಾಷೆಯನ್ನು ದೇವಾಲಯದ ಆಡಳಿತದ ಗಮನಕ್ಕೆ ತಂದು ತೊಟ್ಟ ಸಮವಸ್ತ್ರದಲ್ಲಿಯೇ ದೇಗುಲದ ಸ್ವಚ್ಛತಾ ಕಾರ್ಯಕ್ಕೆ ಮುಂದಾದರು. ತನ್ಮೂಲಕ ವಿದ್ಯಾರ್ಥಿಗಳು ಪ್ರಕೃತಿಯ ವಿಸ್ಮಯವನ್ನು ವೀಕ್ಷಿಸುವ ಹಂಬಲದ ಜೊತೆಗೆ ಪ್ರಕೃತಿಯಿಂದ ಉಂಟಾದ ಸಮಸ್ಯೆಯನ್ನೂ ಬಗೆಹರಿಸಲು ತಾವು ಸಿದ್ಧ ಎನ್ನುವುದನ್ನು ಕಾರ್ಯದಲ್ಲಿ ಸಾದರಪಡಿಸಿದರು.

ವಿದ್ಯಾರ್ಥಿಗಳ ಈ ಸಾತ್ವಿಕ ಕಾರ್ಯಕ್ಕೆ ಉಪ್ಪಿನಂಗಡಿ ಶ್ರೀ ರಾಮ ಶಾಲಾ ಸಂಚಾಲಕ ಯು.ಜಿ. ರಾಧಾ, ಮಾಧವ ಶಿಶು ಮಂದಿರದ ಕಂಗ್ವೆ ವಿಶ್ವನಾಥ ಶೆಟ್ಟಿ, ಹರೀಶ್ ಭಂಡಾರಿ, ಕಡಬ ಸರಸ್ವತಿ ವಿದ್ಯಾ ಕೇಂದ್ರದ ಸಂಚಾಲಕ ವೆಂಕಟರಮಣ ರಾವ್ ಮಾರ್ಗದರ್ಶನ ನೀಡಿ ಸಹಕರಿಸಿದರು. ವಿದ್ಯಾರ್ಥಿಗಳೊಂದಿಗೆ ವಿವೇಕಾನಂದ ಕಾಲೇಜ್ ನ ಗೋವಿಂದರಾಜ ಶರ್ಮ, ಲಕ್ಷ್ಮೀಪ್ರಸಾದ್ ಬೊಟ್ಯಾಡಿ ಭಾಗವಹಿಸಿದರು.